ಹೊಸತರ ಹುಡುಕಟದಲ್ಲಿ ಯುವ ಮನಸ್ಸುಗಳ ಸಂಚಾರ.... ನಿಮ್ಮ ಬರಹಗಳನ್ನು ಇಲ್ಲಿಗೆ ಕಳಿಸಿ.. mathinakatte@yahoo.com

ಪ್ರಜ್ಞೆ ಇಲ್ಲದ ಮಾತುಗಳು ಗೆದ್ದಲಿನಂತೆ

     ಹೃದಯದೊಳಗೆ ಆಗಾಗ ಬಂದು ಹೋಗುವ ಭಾವನೆಗಳು ಜೀವಕ್ಕೆ ಕೆಲಕಾಲ ಸಿಹಿಯ ಹೂರಣವನ್ನು ನೀಡಬಹುದು. ಆದರೆ ಅದು ಸದಾಕಾಲ ಸಿಹಿಯ ಹೂರಣವಾಗಿರದೆ, ಕಹಿಯ ಹೂರಣವಾಗಬಹುದು.  ಯಾವಾಗಲೂ ನಮ್ಮ ಮನಸ್ಸು ನೂತನ ನವೀನ ಭಾವನೆಗಳನ್ನು ಬಿಟ್ಟು ಬಿಡದೆ ನಮ್ಮೋಳಗೆ ಮೂಡಿಸುತ್ತದೆ. ಮೂಡಿದ ಭಾವನೆಗಳು ಸುಂದರ ಹಾಡಾಗುವುದು ಖುಷಿಯ ವಿಚಾರವೇ, ಆದರೂ ಮೂಡಿದ ಭಾವನೆಗಳು ಎಂತಹವು ಎಂಬುದನ್ನು ನಾವು ಯೋಚಿಸಬೇಕಾಗುತ್ತದೆ. ಹಾಡಾಗಿಸುವ ಮೊದಲು ನಮ್ಮೊಳಗಿನ ಅನುಭವವನ್ನು ಜೊತೆಯಾಗಿಸುವುದು ಬಹಳ ಅವಶ್ಯಕ.
     ಒಮ್ಮೊಮ್ಮೆ ಪ್ರೀತಿ ತುಂಬಿದ ಭಾವನೆಗಳು ಕಟ್ಟೆ ಒಡೆದು ಹರಿಯ ಹೊರಟಾಗ ಆ ಭಾವನೆಗಳನ್ನು ತಡೆಯುವಲ್ಲಿ ನಾವು ವಿಫಲರಾದಾಗ, ಇಲ್ಲವೇ ಆ ಭಾವನೆಗಳು ನಮಗೆ ಘಾಸಿ ಉಂಟು ಮಾಡಿದಾಗ ನಾವುಗಳು ಅರಿವಿಲ್ಲದಂತೆ ಮೌನಿಗಳಾಗಿ ಬಿಡುತ್ತೇವೆ. ಹಾಗಾಗಿ ಮೌನಿಗಳಾಗುವ ಮೊದಲೇ ಯೋಚಿಸಬೇಕು. ಭಾವನೆಗಳು ಕಟ್ಟೆ ಒಡೆಯದಂತೆ ಬಂಧಿಸಿಡುವುದು ಹೇಗೆ ಎಂದು ಅರಿತುಕೊಳ್ಳಬೇಕು.
            ನಮ್ಮ ಮಾತುಗಳು ಎಲುಬಿಲ್ಲದ ನಾಲಿಗೆಯಿಂದ ಹೊರ ಹೊರಟಾಗ ಅದು ಎದುರಿನಲ್ಲಿ ಇರುವವರಿಗೆ ಸದಾಕಾಲ ನಗುವನ್ನು ಸೂಸುವಂತೆ ಮಾಡದೆ ಇರಬಹುದು. ನಾವು ಭಾವಿಸಿದಂತೆ ಅದು ಸದಾ ಸಂತೋಷ ಉಕ್ಕಿಸುತ್ತದೆ ಎಂಬುದು ನಮ್ಮ ಭ್ರಮೆಯಾದೀತು ಎಚ್ಚರ. ಭಾವನೆಗಳಿಂದ ಹೊರಹೊಮ್ಮಿದ ಮಾತುಗಳು ನಮ್ಮವರು ಎಂದುಕೊಂಡ ಜೀವಗಳಿಗೆ ಸದಾಕಾಲ ನಗುವನ್ನೇ ತರಿಸುತ್ತವೆ ಎಂಬುದು ಶುದ್ಧ ಸುಳ್ಳು. ಒಮ್ಮೊಮ್ಮೆ ಯೋಚಿಸದೆ ಹರಿಬಿಟ್ಟ ನಾಲಿಗೆಯು ಅವರ ಕರುಳನ್ನು ಹಿಂಡುವಂತೆ ಮಾಡಿಬಿಡಬಹುದು. ನಾವು ಮಾತನಾಡುವ ಭರಾಟೆಯಲ್ಲಿ ಮಾತುಗಳ ಕುರಿತು ಎಚ್ಚರ ತಪ್ಪಿದರೆ, ಪ್ರಜ್ಞೆ ತಪ್ಪಿದರೆ ಭಾವನೆಗಳಿಗೆ ಕೊಡಲಿ ಪೆಟ್ಟು ಕೊಡುವ ಕಾಲ ಒದಗಬಹುದು. ನಮಗೆ ಗೊತ್ತಿರುವ ಸಾಮಾನ್ಯ ಗಾದೆಯಂತೆ ಮಾತು ಮನೆ ಕೆಡಿಸಬಹುದು, ಮನೆಯ ಜೊತೆಗೆ ಮನವನ್ನು ಕೆಡಿಸಿ, ಮಾನವನ್ನು ಹರಾಜು ಹಾಕಬಹುದು ಎಚ್ಚರ..
      ಹಾಗಾಗಿ ನನಗೆ ಪದೇಪದೇ ಅನಿಸುವುದು ನಮ್ಮ ಭಾವನೆಗಳಿಗೆ ಮಾತಿನ, ಬರಹದ ರೂಪ ನೀಡಬೇಕು. ಆದರೆ ಮಿತಿಮೀರಿದ ಭಾವಗಳಿಗೆ ಪ್ರಜ್ಞೆಯೆಂಬ ತೈಲ ಸವರಬೇಕು. ಪ್ರಜ್ಞೆ ಇಲ್ಲದ ಮಾತುಗಳು ಗೆದ್ದಲು ಹಿಡಿದು ಮನೆ ಮನವನ್ನು ಒಮ್ಮೆಲೆ ಬೀಳಿಸಿ ಬಿಡುತ್ತವೆ. ಈ ಕಾರಣದಿಂದಲೇ ಪದೇ ಪದೇ ಮೌನ ಬಹಳ ಸೂಕ್ತವೆನಿಸುತ್ತದೆ. ಒಮ್ಮೊಮ್ಮೆ ಮೌನವೇ ಜಗದ ಸಕಲಕ್ಕೂ ಉತ್ತರವಾಗಿ ಬಿಡುತ್ತದೆ.ಇಲ್ಲ ಉತ್ತರ ಸಿಗುವ ಮೊದಲೇ ಪ್ರಶ್ನೆಗಳನ್ನು ಕೊಂದು ಹಾಕಿಬಿಡಬಹುದೇನೋ.. ಅದೇನೇ ಇರಲಿ ಮೌನ ಮಾತಾಗಬೇಕು. ಭಾವಗಳು ಹೃದಯಾಂತರಾಳದಿಂದ ಹೊರ ಹೊಮ್ಮಿದಾಗ ಅವಾಗಿಯೇ ಚೆಂದದ ಸತ್ವಪೂರ್ಣ ಮಾತುಗಳನ್ನು ನಮ್ಮ ಮುಂದಿಡುತ್ತವೆ. ಮತ್ತೆ ಮತ್ತೆ ನಮ್ಮನ್ನು ಈ ಭಾವ ಜೀವದೊಳಗೆ ಸೇರಿ ಮಾತಿದ್ದರೂ ನಮ್ಮನ್ನು ಮೌನಿಗಳನ್ನಾಗಿಸಿ ವ್ಯಥೆಗಳಿಂದ ದೂರವಾಗಿಸಿ ಬಿಡುತ್ತದೆ. ಹಾಗಾಗಿ ಭಾವ ತುಂಬಿದ ಮೌನವೇ ಸೂಕ್ತವೆನಿಸುತ್ತದೆ....
-ಸುಪ್ರೀತ್ ರಾಜಶೇಖರ್

No comments:

Post a Comment