ಹೊಸತರ ಹುಡುಕಟದಲ್ಲಿ ಯುವ ಮನಸ್ಸುಗಳ ಸಂಚಾರ.... ನಿಮ್ಮ ಬರಹಗಳನ್ನು ಇಲ್ಲಿಗೆ ಕಳಿಸಿ.. mathinakatte@yahoo.com

ಅಂತಃಪತನ

- ಅರ್ಚನಾ. ಹೆಚ್

ಬೆಳಗಿನ ಕೊರೆವ ಚಳಿಯಲ್ಲಿ‌ ಬಾಲ್ಕಾನಿಯ ತೂಗುಯ್ಯಾಲೆ ಜೀಕುತ್ತಾ ಬಿಸಿ ಬಿಸಿ ಟೀ ಹೀರೋದೇ ಒಂದು ತೆರನಾದ ಬೆಚ್ಚನೆಯ ಅನುಭೂತಿ..ಯೋಗ ಮಾಡಿ ದಣಿವಾದ ದೇಹಕ್ಕೆ  ಎರಡು ಓಟ್ಸ್ ಬಿಸ್ಕೆಟ್ ಒಂದು ಕಪ್  ಚಹಾ ನರನಾಡಿಯೆಲ್ಲಾ ಪುನಶ್ಚೇತನ...!..ಆರನೇ ಮಹಡಿಯ ಬಾಲ್ಕನಿಯ  ತೂಗುಯ್ಯಾಲೆಯಲ್ಲಿ ಚಹಾ ಸ್ವಾದಿಸುತ್ತಿದ್ದ  ಶುಭಾಳ ದೃಷ್ಟಿ ಹಿಂಬದಿಯ ರಸ್ತೆಯ ಖಾಲಿ ಸೈಟುಗಳಲ್ಲಿ ಗುಡಿಸಲು ಕಟ್ಟಿಕೊಂಡಿದ್ದ ಹಕ್ಕಿಪಿಕ್ಕಿಯ ಜನಾಂಗದವರತ್ತ ಹರಿಯಿತು..ಕೊಂಕಳಲ್ಲಿ ಎರಡು ಮಕ್ಕಳು ಹೊತ್ತ ಕರ್ರನೆಯ ಸಣಕಲು ದೇಹದ ಸ್ತ್ರೀ, ಆಗ ತಾನೇ  ಹಿಂದಿನ ಖಾಲಿ ಸೈಟ್ನ ಪೊದೆಯಲ್ಲಿ ಬಹಿರ್ದೆಶೆ ಮುಗಿಸಿಬಂದ ಇನ್ನೊಂದು ಮಗುವನ್ನೂ  ಅಲ್ಲೇ ಇದ್ದ ಚಪ್ಪಡಿ ಕಲ್ಲ ಮೇಲೆ ಕೂರಿಸಿ ಒಂದಕ್ಕೆ ಅಂಡು ತೊಳೆದು ಉಳಿದವೆಲ್ಲದರ ವಸ್ತ್ರ ಕಳಚಿ  ಬಿಂದಿಗೆಯಿಂದ ಬೆಳ್ಳನೆಯ ಬಕ್ಕೆಟ್ಟಿಗೆ ನೀರು ತುಂಬಿಸಿ  ಬೆತ್ತಲಿದ್ದ ಮಕ್ಕಳ ಮೇಲೆ ನೀರು ಹುಯ್ದಳು...ಬಹುಶಃ ನೀರು ತಣ್ಣಗಿತ್ತೇನೋ!?? ನಾಲ್ಕೈದು ಚೊಂಬು ನೀರು ಹಾಕಿದ ಮೇಲೆ ಚಳಿಯಲ್ಲಿ ನಡುಗುತ್ತಿದ್ದ ಮಕ್ಕಳನ್ನು ಬಟ್ಟೆಕೊಡವುವಂತೆ ಗಾಳಿಗೆ ಸುಯ್ಯನೆ ಕೊಡವಿ ಗುಡಿಸಲಿಗೆ  ಕರೆದೊಯ್ದಳು..ಎರಡ್ಮೂರು ನಿಮಿಷದ ಬಳಿಕ ಆಕೆಯ ಗಂಡ ಮೂವರನ್ನೂ ಗುಡಿಸಲ ವಾರಾಂಡದಲ್ಲಿ ಆಟವಾಡಿಸುತ್ತಾ ಕೇಕೆ ಹಾಕಿ ನಗಿಸುತ್ತಿದ್ದದ್ದು  ಶುಭಾಳ ಕಿವಿಗೂ ಕಡಲಲೆಯಂತೆ ಅಪ್ಪಳಿಸಿ, ಮನಸ್ಯಾಕೋ ಭಾರವಾಗಿ ನೆನಪ ನೀರವತೆ ಅವಳನ್ನು  ಕಿವುಡಾಗಿಸಿತು...


*****
"ರೀ ಮಗಳ ಹತ್ತನೇ ವರ್ಷದ ಬರ್ತಡೇ  ಗ್ರಾಂಡ್ ಆಗಿ ಸೆಲಬ್ರೇಟ್ ಮಾಡಬೇಕು .. ಹೇಗೂ ಅಪಾರ್ಟ್ಮೆಂಟ್ನ ಕಮ್ಯುನಿಟಿ ಹಾಲ್ ಇದ್ಯಲ್ಲಾ ಕಡಿಮೆ ದುಡ್ಡಿನಲ್ಲೇ ಆಗುತ್ತೆ..ಬಫೆ ಸಿಸ್ಟಮ್ ಮಾಡಿಸಿಬಿಡೋಣ..ಕೊನೆಯಲ್ಲಿ ಬೀಡಾ ಐಸ್ ಕ್ರೀಂ ಇರಲಿ ರೀ...!  ನೀವು ಇಲ್ಲ , ಆಗಲ್ಲ ಅಂತೆಲ್ಲಾ ಸಬೂಬು ‌ಹೇಳೋ ಹಾಗೆ ಇಲ್ಲ...ಆ ಸ್ವರ್ಣ ,ಚಂಪಾ ಎಲ್ಲರ ಮನೆಯಲ್ಲಿ ತಿಂದು ಬಂದಾಗಿದೆ..ನಾವು ಅವರನ್ನೆಲ್ಲಾ  ಕರೆಯದಿದ್ರೆ ಹೇಗೆ!? ಅಯ್ಯೋ!!  ಆ 'ಎ' ಬ್ಲಾಕ್ ನ ಮೂರ್ನಾಲ್ಕು ನಾರ್ತೀಸ್ ಫ್ಯಾಮಿಲೀನೆ ಮರೆತ್ಬಿಟ್ಟೆ..ಅವರನ್ನು ಬಿಡೊ ಹಾಗೇ ಇಲ್ಲ..! ಪ್ರತಿ ವರ್ಷ ನವರಾತ್ರಿಗೆ ದಾಂಡಿಯಾ  ನಮಗೆಲ್ಲಾ ಹೇಳಿಕೊಡೋರೆ ಅವ್ರು..!!. ಒಟ್ಟು ೫೦ ಮನೆ...‌ವಾರದ ಮುಂಚೆಯೇ ಇಂಟರ್ಕಾಮ್ನಲ್ಲಿ ಕರೆ ಮಾಡಿ ಕರೆದುಬಿಡಬೇಕು.. ರಿಟರ್ನ್ ಗಿಫ್ಸ್ಟ್ ಸ್ವಲ್ಪ ಕಾಸ್ಟ್ಲಿಯದೇ ತರಬೇಕು..ನಮ್ಮ ಸ್ಟೇಟಸ್ಗೆ ತಕ್ಕನಾಗಿ...!! "  ನಿರರ್ಗಳವಾಗಿ ಬಡಬಡಾಯಿಸಿದ್ದೆ ..

ನನಗೋ ಮಗಳ ಬರ್ತಡೇ ಎಲ್ಲರಂತೆ ಗ್ರಾಂಡ್ ಆಗಿ ಮಾಡೋ ಆಸೆ...! ಇವರೋ ದುಡ್ಡು ಬಿಚ್ಚುವ ಜಾಯಮಾನದವರಲ್ಲ. ಜೊತೆಗೆ ಅತ್ತೆಯದಷ್ಟು ಕೊಂಕು...ಇಷ್ಟೆಲ್ಲಾ ಹೇಳಿದರೂ ನಿರ್ಲಿಪ್ತವಾಗಿ ನಿಂತಿದ್ದ ಸುಘೋಷನನ್ನು ನೋಡಿ ಅಂದು ಕೆರಳಿಹೋಗಿದ್ದೆ.. "ರೀ ನಿಮ್ಗೆ ಹೇಳ್ತಿರೋದು..."
ಸುಘೋಷ ಮರುಮಾತಾಡದೆ ಅಲ್ಲಿಂದ ಎದ್ದು ನೆಡದಿದ್ದ..ಬಹುಶಃ ಅವನ ತಲೆ ಚಿಟ್ಟು ಹಿಡಿಯುವುದರಲ್ಲಿತ್ತೇನೋ!!??.. ಅವನ ಹಿಂದೆಯೇ ಕೋಪಗ್ರಸ್ತಳಾಗಿ  ಮತ್ತೊಮ್ಮೆ ಅಬ್ಬರಿಸಿದ್ದೆ. "ನಾನು  ನೋಡ್ತಾನೆ ಇದ್ದೀನಿ ಯಾವುದಕ್ಕೂ ರಿಯಾಕ್ಟ್ ಮಾಡ್ತಿಲ್ಲ ನೀವು.. ಹೆಂಡ್ತಿ ಮಕ್ಕಳ ಮೇಲೆ ಇಂಟರೆಸ್ಟ್ ಇದ್ರೆ ತಾನೆ!?

ನಿನ್ನ ಕಟ್ಕೊಂಡಾಗಿಂದ ನೆಮ್ಮದಿ ಸುಖ ಶಾಂತಿ ಯಾವ್ದು ಕಾಣಲಿಲ್ಲ.. ಕೊನೆ ಪಕ್ಷ  ಮಗಳಿಗಾದ್ರು  ಯಾವ್ದು ಕಮ್ಮಿ ಮಾಡಬಾರದು ಅಂತ ಹರಸಾಹಸ ಮಾಡ್ತಿದೀನಿ ಅದೂ ಆಗ್ತಿಲ್ಲ.. ಯು ಸ್ಪಾಯಿಲ್ಟ್ ಮೈ ಲೈಫ್ "  .. !!  ಚೀರಿದ್ದೆ...ಬಿಕ್ಕಳಿಸಿ ಅತ್ತಿದ್ದೆ  ಕೂಡ..‌ಸುಘೋಷ ಮರುಮಾತಾಡದೆ ಕಾರ್ ಕೀ ತೆಗೆದುಕೊಂಡು ಹೊರಟುಬಿಟ್ಟಿದ್ದ...
ನಾನೂ  ಮತ್ತಷ್ಟು ಕುಪಿತಳಾದೆ..ಗೆಳತಿ ಸ್ನೇಹ  ನೀಡಿದ್ದ  ಪರಿಹಾರದ ಮಾರ್ಗವೇ ಇದಕ್ಕೆಲ್ಲಾ ಮದ್ದು ಎನಿಸಿತ್ತು.. ಸ್ನೇಹಾ ಅಂದು ವಿಚಾರಿಸಿ ಕೊಟ್ಟಿದ್ದ ವೃದ್ದಾಶ್ರಮದ ನಂಬರಿಗೆ ರಿಂಗಣಿಸಿದೆ..

*********

"ಹಲೋ ನಮಸ್ತೇ  ಶರವಣ ವೃದ್ದಾಶ್ರಮ!.." ಅತ್ತ ಕಡೆಯಿಂದ ದನಿ‌ಬಂತು..
"ನಮಸ್ತೇ ಸರ್..ನನ್ನ ಗೆಳತಿ ಸ್ನೇಹ  ಈ ಮುಂಚೆ ನಿಮ್ಮಲ್ಲಿ ಮಾತನಾಡಿದ್ದಳು..ನಾನು ಶುಭಾ ಅಂತಾ " ಅತ್ತೆಯನ್ನು ಸೇರಿಸೋ ತರಾತುರಿಯಲ್ಲಿ ಮೇಡಮ್  ಗೊತ್ತಾಯ್ತು...ಹೇಳಿ.. ಯಾವತ್ತು  ಬರ್ತೀರಾ " !? ಅತ್ತ ಕಡೆಯಿಂದ....

" ಈ ವಾರದಲ್ಲಿ ಬರ್ತೀನಿ.. ನೀವು ನನಗೆ ಖರ್ಚು ವೆಚ್ಚದ ವಿವರ ಕೊಡಿ .. ಒಟ್ಟಿಗೆ ಅಮೌಂಟ್ ಕಟ್ಟಬೇಕೋ ಅಥವಾ ಹೇಗೆ ತಿಳಿಸಿಕೊಡಿ ನಂತರ ಯೋಚಿಸ್ತೀವಿ.."
" ಮೇಡಮ್, ಅದು ವರ್ಷಕ್ಕೆ  ೧ ಲಕ್ಷ ಆಗುತ್ತೆ ಅವರ ಸಂಪೂರ್ಣ ಶುಶ್ರೂಷೆ ಔಷಧಿ ಮಾತ್ರೆ ವಸತಿ ಊಟ ಎಲ್ಲಾ ಅದರಲ್ಲೇ ಸೇರಿಸಿ‌ ..ನಿಮಗೆ ೧೦ ವರ್ಷದ ಪ್ಯಾಕ್ ತಗೊಂಡ್ರೆ ಕಮ್ಮಿ ಆಗುತ್ತೆ ನೋಡಿ.. ೮.೫ ಲಕ್ಷ ಆಗುತ್ತೆ.. ೫ ವರ್ಷದ ಪ್ಯಾಕ್ ಆದ್ರೆ ೪.೫ ಲಕ್ಷ ಆಗುತ್ತೆ..ಅವರು ಸ್ಪೆಷಲ್ ಕೇಸ್ ಅಲ್ವಾ ಸೋ.."
" ಓಹ್ ಸರಿ, ಅಷ್ಟೊಂದು ಕಾಸ್ಟ್ಲಿನಾ!? ಈ ವೀಕ್  ಒಳಗಾಗಿ ನಿಮ್ಮಲ್ಲಿಗೆ ಬರ್ತೇವೆ..ಉರುಳೋ ಮರ ಇಷ್ಟು ದೊಡ್ಡ ಮೊತ್ತ ಕಟ್ಟೋದಂದ್ರೆ ಯೋಚನೆ ಮಾಡೋ ವಿಚಾರವೇ..! " ಎಂದು ಫೋನಿಟ್ಟಿ ದ್ದಳು ಶುಭಾ...

ತಿಂಗಳ ಹಿಂದೆ ಗಂಡನನ್ನು ಕಳೆದುಕೊಂಡ ಆಘಾತದಲ್ಲಿ ಶಾಂತಾಗೆ ದೇಹದ ಎಡಭಾಗ ಸಂಪೂರ್ಣ ಕೊರಡಂತೆ ನಿಷ್ಕ್ರಿಯವಾಗಿತ್ತು.. ಸುರದ್ರೂಪಿ ಶಾಂತಾಗೆ ಇನ್ನೂ ಅರವತ್ತೂ ದಾಟಿರಲಿಲ್ಲ...ನರಸಿಂಹರಾಯರು ಶಾಂತಾರ  ಭಾಂದವ್ಯ ಅನೂಹ್ಯವಾಗಿತ್ತು.. ಸುಘೋಷನಂತು ಚಿಕ್ಕಂದಿನಿಂದ ಅವರು ಜಗಳವಾಡಿದ್ದೆ ನೋಡಿಲ್ಲ..ಅಂತಹ ಆದರ್ಶ ದಂಪತಿಗಳು..! ತಂದೆ ತಾಯಿಯರ ಬಗ್ಗೆ ಅಪಾರ ಗೌರವ ಪ್ರೀತಿ ಸುಘೋಷನಿಗೆ..
" ಶುಭಾ, ಅಮ್ಮನ ಪರಿಸ್ಥಿತಿ ನೋಡ್ಲಿಕ್ಕೆ ಆಗ್ತಿಲ್ಲ ನನಗೆ.. ಅಪ್ಪನ್ನು ಕಳ್ಕೊಂಡೆ...ಅನಾಥ ವಾಗಿಬಿಟ್ಟೆ " ವ್ಯಸ್ತನಾದ ಸುಘೋಷ  ಬಿಕ್ಕಳಿಸಿ ಅತ್ತಿದ್ದ...
ಇತ್ತ ಶುಭಾಗೆ ಇಕ್ಕಳದಲ್ಲಿ ಸಿಕ್ಕಿದಂತಾಗಿತ್ತು...
ಆಸ್ಪತ್ರೆಯಿಂದ ಮನೆಗೆ ಬಂದರೆ ಅತ್ತೆಯನ್ನು  ನೋಡಿಕೊಳ್ಳೋರ್ಯಾರು!? ತನ್ನ ತಲೆ ಮೇಲೆ ಬಿದ್ದರೆ!? ಮದುವೆಯಾಗಿ ಹನ್ನೆರಡು ವರ್ಷಗಳಾಯ್ತು.. ಅತ್ತೆ ಮಾವನ ಅಧೀನದಲ್ಲಿ ಸುಖ ಸಂತೋಷ ನೆಮ್ಮದಿ ಎಲ್ಲಾ ಮೂಟೆಕಟ್ಟಿ  ಅನಾದರವಾಗಿ ಬದುಕಿದ್ದಾಯ್ತು.. ಎಲ್ಲರಂತೆ ನಾಲ್ಕು ಕಡೆ ಸುತ್ತಲಿಲ್ಲ ಲೈಫ್ ನ ಸ್ವಲ್ಪವೂ ಎಂಜಾಯ್ ಮಾಡಲಿಲ್ಲ...ಮನೆಗೆ ಬರೋ ನೆಂಟರಿಸ್ಟರು ನಾದಿನಿ ಅವರ ಮಕ್ಕಳ ಚಾಕರಿ ಮಾಡೋದೆ ಆಗೋಯ್ತು..  ಗಂಡ ಕಷ್ಟ ಪಟ್ಟು ದುಡಿಯೋ ದುಡ್ಡು , ಹಬ್ಬದ ಬೋನಸ್ ಅಮೌಂಟ್ ಎಲ್ಲಾ ಪ್ರತಿ ಹಬ್ಬಕ್ಕೂ ನಾದಿನಿಯ ಮಕ್ಕಳ ವಸ್ತ್ರೋಪಚಾರಕ್ಕೇ  ಮೀಸಲಾಗ್ತಿತ್ತು..ಅವಳೋ ಮೂರು ಮೂರು ದಿನಕ್ಕೆ ಬಂದು , ಅಮ್ಮಾ ,! ಕುಮಾರ ಹಾಗಂದ ಹೀಗಂದ  ಅಂತ  ಅವಳ ಗಂಡನ
ಮೇಲಷ್ಟು ಗೂಬೆ ಕೂರಿಸಿ,ಅತ್ತು ಕರೆದು ರಂಪ ಮಾಡಿ ತಿಂಗಳಿಗೆ ಕಮ್ಮಿ ಅಂದರೂ, ನಾಲ್ಕೈದು ಸಾವಿರ ವಸೂಲಿ ಮಾಡಿ ತನ್ನಣ್ಣ ನ ಜೇಬಿಗೆ ಕತ್ತರಿ ಹಾಕಿ ಹೋಗುತ್ತಿದ್ದಳು.. ಇದರ ಬಗ್ಗೆ ಶುಭಾ ಒಂದು ಮಾತಾಡಿದರೆ ಸಾಕಿತ್ತು.. "ಅಯ್ಯೋ !!ಅಣ್ಣ ತಂಗಿಯರ ಭಾಂದವ್ಯನ ದುಡ್ಡಿನಲ್ಲಿ ಅಳಿತಾಳೆ ಇವಳು..ಹಿಂದು ಮುಂದು ಇಲ್ದಿರೋ ಹುಡುಗಿ, ಮನೆಗೆ ತರಲೇ ಬಾರದಿತ್ತು ಕಣೋ ಸುಘೋಷ..ಮನೆಮುರುಕಿ !!"  ಅಂತಾ ಬೊಂಬುಳಿ ಬಡೆಯುತ್ತಾ, ಹೋ!! ಎಂದು  ಅತ್ತು ಮಗ ಸೊಸೆಯ  ಮಧ್ಯೆ ವೈಷಮ್ಯ ತಂದಿಕ್ಕಿ ದೊಡ್ಡದೊಂದು ಕಂದಕ ಕೊರೆದು ತಮಾಷೆ ನೋಡುತ್ತಿದ್ದರು ಶಾಂತಾ...!!
ಅಯ್ಯೋ ..!ಒಂದೋ ಎರಡೋ !!?? ಮದುವೆಯ ವಾರ್ಷಿಕೋತ್ಸವಕ್ಕೆಂದು ಸುಘೋಷ ಶುಭಾಳಿಗೆ ಹೊಸ ಸೀರೆ ತಂದರೆ ಮೂತಿ ಮುರಿದು  ಮೂಲೆಯಲ್ಲಿ ಕೂತು ಊಟ ತಿಂಡಿ ಬಿಟ್ಟಿದ್ದರು..ಅವರಾಡಿದ ತಾಳಕ್ಕೆ ಕುಣಿಯುತ್ತಾ ನರಸಿಂಹ ರಾಯರೂ ಶುಭಾಳ ಮೇಲೆ ಕಿಡಿಕಾರಿದ್ದರು.... ಎಲ್ಲದಕ್ಕೂ ಅವರದೇ ರೀತಿ ರಿವಾಜುಗಳು..!
ಮೀರಿದರೆ ಮುಗೀತು ಕಥೆ!! ..
ಹಾವು ಸಾಯ್ಬಾರ್ದು, ಕೋಲು ಮುರಿಬಾರ್ದು ಅನ್ನೋ ವ್ಯಕ್ತಿತ್ವ ಅವರದು... ಎಲ್ಲವನ್ನು ಎಲ್ಲರನ್ನು ಸೈರಿಸಿಕೊಂಡು ಮಾನ ಮರ್ಯಾದೆಗಂಜಿ  ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದಳು ಶುಭಾ...‌ನರಸಿಂಹರಾಯರು ಹೆಂಡತಿಯ ತಪ್ಪಿದ್ದರೂ....., ಆಕೆಯ ಪರವೇ...! ಸುಘೋಷನೋ ಶ್ರವಣಕುಮಾರ..ಕುರುಡುಪ್ರೀತಿ. ..ಅಲ್ಲಲ್ಲ ಹುಚ್ಚು ಪ್ರೀತಿ..!! ಮಗಳೊಬ್ಬಳೇ ಶುಭಾಳ ಪಾಲಿನ ಬಹುದೊಡ್ಡ ಆಸ್ತಿ....!!
ಮನೆಯಲ್ಲಿ ಏನೇ ಘಟಿಸಿದರೂ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಿದ್ದದ್ದು ಶುಭಾಳೇ! ಸಾಕು ಸಾಕೆನಿಸಿತ್ತು ಈ ಬಂಡ ಜೀವ, ಜೀವನ ಅವಳಿಗೆ!..
ಅಡಿಗೆ ಮನೆಯಲ್ಲಿ ಗೋಡಂಬಿ ಬಾದಾಮಿ‌ ದ್ರಾಕ್ಷಿಗಳ ಬೇಹುಗಾರರಾಗಿ ಶಾಂತ ನಿಲ್ಲುತಿದ್ರು...ಹಬ್ಬ ಹರಿದಿನಗಳಲ್ಲಿ  ಪಾಯಸಕ್ಕೆ ದ್ರಾಕ್ಷಿ ಗೋಡಂಬಿ ಹುರಿಯೋವಾಗ ಶಾಂತ, ಶುಭಾಳ ಹಿಂದೆಯೇ .. !ಇದರ ಹಿಂದಿನ ಮರ್ಮ ಶುಭಾಳಿಗೆ ಹೇಸಿಗೆ ತರಿಸಿತ್ತು..ಇದಕ್ಕೆಲ್ಲಾ ಅಂತಿಮ ಹಾಡಲು
ಕಂಪ್ಯೂಟರ್ ಕೋರ್ಸ್ ಮಾಡಿ ಐಟಿ ಕೆಂಪನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡಳುು..
ಸ್ವಂತ ಸಂಪಾದನೆ ಮನೆಯಲ್ಲಿ ಹೊಸ ಸ್ಥಾನ ನೀಡಿತ್ತು..ತಕ್ಕ ಮಟ್ಟಿಗೆ ನೆಮ್ಮದಿಯೂ ದೊರಕುತಿತ್ತು..ಅವಳಲ್ಲೂ ಆತ್ಮವಿಶ್ವಾಸ ಚಿಗುರೊಡೆಯಲಣಿಯಿಟ್ಟಿತ್ತು...ಸ್ವಂತ ಸಂಪಾದನೆ ಎಂದರೆ ಹಾಗೆಯೇ ! ಸ್ವ ಪ್ರತಿಷ್ಠೆ ,ಸ್ವಗೌರವ,ಸ್ವಾವಲಂಬಿತನಗಳನ್ನು  ಅದರಷ್ಟಕ್ಕದೇ ಊರ್ಜಿತಗೊಳಿಸಿಬಿಡುತ್ತೆ..!

****
ಲಕ್ವ ಹೊಡೆದ ಅಮ್ಮನನ್ನು ಆಸ್ಪತ್ರೆಗೆ  ಎರಡು ಸಾರಿ ಬಂದು ನೋಡಿದ ಮಗಳು "ಅತ್ತಿಗೆ ನನ್ನ ಗಂಡ ಕ್ರೂರಿ  ಅವನಿಗೆ ಗೊತ್ತಿಲ್ಲದಂತೆ ಬಂದು‌ಹೋಗುತ್ತಿದ್ದೇನೆ.. ನನ್ನಮ್ಮನ್ನ ನೀವೇ ಚೆನ್ನಾಗಿ ನೋಡಿಕೊಳ್ಳಿ ಪ್ಲೀಸ್"ಅಂತ ಹೇಳಿ ಹೋದವಳು ವಾರವಾದರೂ ಮನೆ ಕಡೆ ಸುಳಿಯಲಿಲ್ಲ..ಒಬ್ಬಳೇ  ಅತ್ತೆಯ ಶುಶ್ರೂಷೆ ಗೆ ನಿಂತಳು.. .... ಹೆಜ್ಜೆ ಹೆಜ್ಜೆಗೂ ಅನುಮಾನ, ಅವಮಾನ ಅಪನಂಬಿಕೆ ಎಲ್ಲವನ್ನು ಸೈರಿಸಿಕೊಂಡಿದ್ದ ಶುಭಾಗೆ ಅವರ ಸೇವೆ ಮಾಡೋ ಯಾವ ಕಳಕಳಿ, ಕನಿಕರ ಕರುಣೆಯೂ  ಉಳಿದಿರಲಿಲ್ಲ.ಆದರೂ ಗಂಡನ ಸಂತೋಷಕ್ಕಾಗಿ ಮಾಡಿದಳು.. ಬೆಡ್ ಪ್ಯಾನ್ ಕೊಡೋದು ಕಾಲು ಕೈಗಳಿಗೆ ಔಷದಿ ಹಚ್ಚೋದು.. ಬರೋಬ್ಬರಿ ಒಂದು ತಿಂಗಳು ಆಫೀಸಿನಲ್ಲಿ  ರಜೆ ತೆಗೆದುಕೊಂಡಾಗಿತ್ತು.. ಮತ್ತೆ ರಜೆ ಕೇಳಿದರೆ ಕೆಲಸ ಕಳೆದುಕೊಳ್ಳುವ ಭಯವಿತ್ತು...ಧೈರ್ಯ ಮಾಡಿ ಸುಘೋಷನನ್ನು ಒಪ್ಪಿಸಿ ಶುಶ್ರೂಷಕಿಯನ್ನು ನೇಮಿಸಿ  ಮನೆಯಿಂದ ಜಾರಿಕೊಂಡಳು.. ಅವರೋ  ಮೂರು ದಿನ ಕೆಲಸ ಮಾಡಿ ನಾಲ್ಕನೇ ದಿನಕ್ಕೆ ಕೈಕೊಡುತ್ತಿದ್ದರು... ಮತ್ತೆ ಮತ್ತೆ ಶುಭಾಳ ಮೇಲೆ ಕೆಲಸದ ಹೊರೆ ಬೀಳುತ್ತಲೇ ಇತ್ತು..
"ರೀ ನಿಮ್ಮ ಪರಿಸ್ಥಿತಿ ನನ್ನಿಂದ ನೋಡೋಕಾಗ್ತಿಲ್ಲ.. ನಿಮಗೆ ಆಫೀಸ್ನಲ್ಲೂ ಸರಿಯಾಗಿ ವರ್ಕ್ ಮಾಡೋಕೆ ಆಗ್ತಿಲ್ಲ ಅನ್ನಿಸ್ತಿದೆ..ಮಗುವೂ ಅತ್ತೆಯ ವರ್ತನೆಗೆ ಹೆದರಿದೆ.. ಒಳ್ಳೆ ವೃದ್ದಾಶ್ರಮ ನೋಡಿ ಬಿಡೋಣ ನಿಮ್ಮಮ್ಮನ್ನ.. ದಯವಿಟ್ಟು ಅರ್ಥ ಮಾಡ್ಕೋಳಿ ..ಮಾತು ಬೇರೆ ನಿಂತಿದೆ ಅವರಿಗೆ .. ಜೋರು ಜೋರಾಗಿ  ಕೆಟ್ಟದಾಗಿ ಕೂಗ್ತಾರೆ ನಮಗೇ ಭಯವಾಗುತ್ತೆ.. ನರ್ಸ್  ಗಳನ್ನು ಟ್ರೈ ಮಾಡಿ ಆಯ್ತು..ಇವರು ಹೀಗಾಡೋದಕ್ಕೆ ಯಾರು ಉಳಿಯೋಲ್ಲ.ಒಳ್ಳೆ ಫೆಸಿಲಿಟಿ ಇರೋ ವೃದ್ದಾಶ್ರಮಕ್ಕೆ ಬಿಡೋಣ" ಬೆಣ್ಣೆಯಲ್ಲಿ ಕೂದಲು ತೆಗೆಯುವಂತೆ ಸಾವಕಾಶವಾಗಿ ಸುಘೋಷನಿಗೆ ಅರ್ಥೈಸಲೆತ್ನಿಸಿದ್ದಳು....
ಆದರೆ ಸುಘೋಷ " ಇಂಪಾಸಿಬಲ್" ಅಂತ ಉತ್ತರಿಸಿ ಹೊರನಡೆದಿದ್ದ.

******
ಉಳಿದದ್ದು ಒಂದೇ...ಈ ಮನೆಯಲ್ಲಿ ನಾನಿರಬೇಕು ಇಲ್ಲವೇ ಇವರಮ್ಮ... ನಾನಂತೂ ಮನೆ ಬಿಟ್ಟು ಹೋಗೋಕೆ ಸಾಧ್ಯವಿಲ್ಲ್ಲ..ಯಾಕಂದ್ರೆ ನನ್ನಪ್ಪ ನಾವು ಮದುವೆಯಾದ ಮೊದಲ ವಾರ್ಷಿಕೋತ್ಸವಕ್ಕೆ ಉಡುಗೊರೆಯಾಗಿತ್ತ ಮನೆ ಇದು..ನನ್ನದು...ನನ್ನ ಹೆಸರಿನಲ್ಲಿದೆ...ಹೇಗೂ ತಿಂಗಳಿಗೆ ಇಪ್ಪತ್ತೈದು ಸಾವಿರ ಸಂಬಳ ಬರುತ್ತೆ ಸಾಕು..!
ಇದಕ್ಕೆಲ್ಲಾ ಮಂಗಳ ಹಾಡಲೇಬೇಕು...ಈ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಎಲ್ಲಾ ಪೂರ್ವಾಪರಗಳನ್ನು  ಗ್ರಹಿಸಿ, ಚಿಂತಿಸಿಯಾಗಿತ್ತು... ಶುಭಾ  ಅಂದು ರಾತ್ರಿ ಮನಸ್ಸು ಗಟ್ಟಿ ಮಾಡಿಕೊಂಡು ಭಂಡ ಧೈರ್ಯಮಾಡಿಕೊಂಡು ಸುಘೋಷನನ್ನು ಮಾತಿಗೆಳೆದಳು..
" ರೀ ನಿಮ್ಮಮ್ಮನನ್ನು ಈ ತಿಂಗಳು ಮುಗಿಯೋದ್ರಲ್ಲಿ  ಮೊನ್ನೆ ಹೇಳಿದ್ನಲ್ಲಾ  ವೃದ್ದಾಶ್ರಮಕ್ಕೆ ಸೇರ್ಸೋಣ.. ಮುಂದಿನ ತಿಂಗಳು ಪುಟ್ಟಿ ಬರ್ತಡೇ.. ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡ್ಬೇಕು.. ! ಇವರು ಕೆಟ್ಟದಾಗಿ ಕೂಗಾಡ್ತಾರೆ..ಬಂದವರ ಎದುರು ಮರ್ಯಾದೆ ಹೋಗುತ್ತೆ...!ನೆನ್ನೆ ಬೆಳಗ್ಗೆ  ಇದರ ಬಗ್ಗೆ ಮಾತಾಡಿದ್ದಾಗಿದೆ..ನಿಮ್ಮಮ್ಮನನ್ನು ನೋಡ್ಕೊಳ್ಳೋಕೆ ನಂಗಂತು ಸಾಧ್ಯವೇ ಇಲ್ಲ.. ಇವತ್ತೇ ಒಂದು ನಿರ್ಧಾರಕ್ಕೆ ಬನ್ನಿ.. ನನ್ನಿಂದ ಕಾಯೋಕಾಗಲ್ಲ.. ನಾನೋ ಅವರೋ!!??.." ಮಾತು ಹದ ತಪ್ಪಿತ್ತು..
ಸುಘೋಷನ ತಾಳ್ಮೆಯೂ ಎಲ್ಲೆ ಮೀರಿತ್ತು...ಎತ್ತಿದ ಮಾತಿಗೆ ಮುಖ ಗಂಟಿಕ್ಕಿ ಅಸಹನೆಯಿಂದ ಕ್ರುದ್ದನಾಗಿ " ನೀನೊಬ್ಬಳು ಹೆಣ್ಣೇನೇ!? ಮನೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳೋವಷ್ಟು ತಲೆ ,ವ್ಯವಧಾನ ಇಲ್ವಾ ನಿಂಗೆ"!? ನಾನು ಬದುಕಿರೋವಾಗ ನನ್ನಮ್ಮ ಯಾಕೆ ವೃದ್ದಾಶ್ರಮ ಸೇರ್ಬೇಕು!? ಬರ್ತಡೇ ಬರ್ತಡೇ ಅಂತಾ ಒಂದೇ ಸಮ ಬಡ್ಕೋತಿದೀಯಲ್ಲಾ ಬುದ್ದಿಕೆಟ್ಟಿದೀಯಾ ನಿಂಗೆ..?? ಅಪ್ಪ ತೀರ್ಕೊಂಡು ಎರಡು ತಿಂಗಳಾಗಿಲ್ಲ  ,ಅಮ್ಮನ ಆರೋಗ್ಯ ಹೀಗಿದೆ  ಇದರ ಮೇಲೆ ಪಾರ್ಟಿ ಬೇಕಾ ನಿನಗೆ? ಯಾವ ಸಂತೋಷಕ್ಕೆ ಮಾಡ್ಲಿ!? ಹೇಳೇ!!..."ಸುಘೋಷ ಎಂದೂ ಈ ರೀತಿ ಮೃಗದಂತೆ ವರ್ತಿಸಿರಲಿಲ್ಲ.., ಶುಭಾ ಒಂದು ಕ್ಷಣ ಹೆದರಿದರೂ ಮರುಕ್ಷಣ ಕೆಂಡಮಂಡಲಾದಳು..
ಇಬ್ಬರ ಮಾತು ನಿಯಂತ್ರಣ ತಪ್ಪಿತ್ತು
" ಮದುವೆಯಾದಾರ್ವಿಂದ  ನಿಮ್ಮನೆಯವರ ಜೀತ ಮಾಡೋದೆ ಆಗೋಯ್ತು ನನಗೆ..ಎಲ್ಲಾ ಸಹಿಸಿಕೊಂಡು ಸಾಕಾಗಿದೆ .. ಮಗಳ ಹತ್ತನೇ ವರ್ಷದ ಬರ್ತಡೇ ಪದೇ ಪದೇ ಬರುತ್ತಾ!? ನನಗಿನ್ನು ಆಗೋಲ್ಲ.. ಒಂದೋ ಮನೆಯಲ್ಲಿ ನಾನಿರಬೇಕು ಇಲ್ಲ ನಿಮ್ಮಮ್ಮ ...!!  ನಿಮ್ಮೊಟ್ಟಿಗೆ ಜಗಳ ಆಡೋ ಮನಸ್ಸಿಲ್ಲ..೨ ದಿನ ಸಮಯ ಕೊಡ್ತೀನಿ ನಿರ್ಧಾರ ಮಾಡಿ ನಾನೋ ಅವರೋ!!?? ಹೇಳಿ ಅಷ್ಟೇ...."
ಎಂದಷ್ಟೇ ಹೇಳಿ ದೊಪ್ಪನೆ ಹಾಸಿಗೆಯ ಮೇಲೆ ಕುಕ್ಕರಿಸಿ ಬೆಡ್ಶೀಟ್ ಎಳೆದುಕೊಂಡು ಮಲಗಿದಳು..
ಮರುದಿನ ಶುಭಾ, ಶಾಂತಾಳ ಕೋಣೆಗೆ ಕಾಲು ಇಡಲಿಲ್ಲ... ಆ ಎರಡು ದಿನ ತಾಯಿಯ ಆರೈಕೆ ಅವನೇ ಮಾಡಿದ್ದ..ಹೋಟೆಲಿನಿಂದ ಊಟ ತಂದುಕೊಟ್ಟಿದ್ದ...
ಇಬ್ಬರಿಗೂ ಮಾತಿರಲಿಲ್ಲ.. ಸುಘೋಷ ಅಂದು ಮುಂಜಾನೆ ಬೇಗ ಎದ್ದು ಸಾಮಾನುಗಳನ್ನೆಲ್ಲಾ ಪ್ಯಾಕ್ ಮಾಡುತಿದ್ದ.. ಶುಭಾ ಇದನ್ನು ಸುಘೋಷ ನಿಂದ ನಿರೀಕ್ಷಿಸಿರಲಿಲ್ಲ.. ನನ್ನ ಈ ಹಟದಿಂದ ಸುಘೋಷ ಅವರಮ್ಮನನ್ನು ವೃದ್ದಾಶ್ರಮಕ್ಕೆ ಖಂಡಿತ ಸೇರಿಸಬಹುದೆಂದು ಎಣಿಸಿದ್ದಳು ಆದರೆ ಅವಳ ಊಹೆ ಬುಡಮೇಲಾಗಿತ್ತು..ಅವನನ್ನು ಮಾತಿಗೆಳೆವ ಗೊಡವೆಗೂ ಮುಂದಾಗಲಿಲ್ಲ.. ಕೊನೆಯದಾಗಿ ಮಗಳ ಬಳಿ ಬಂದ ಸುಘೋಷ ‌ನೀನು " ಅಪ್ಪನ ಜೊತೆ ಇರ್ತಿಯೋ?  ಅಮ್ಮನ ಜೊತೆ ಇರ್ತೀಯೋ" ಎಂದಷ್ಟೇ ಕೇಳಿದ್ದ.. ಮಗಳು ಇಬ್ಬರೂ ಬೇಕು ಎಂದು‌ ಅಳುತ್ತಾ ಗೋಗರೆದರೂ ಸುಘೋಷ ನ ಮನ ಕರಗಲಿಲ್ಲ.. ಇತ್ತ ಶುಭಾಳದೂ... ತಾಯಿಯೊಂದಿಗೆ ಹೊರಟೇಬಿಟ್ಟ..ತಿಂಗಳಾದರೂ ಫೋನಿಲ್ಲ ಸಂದೇಶವಿಲ್ಲ.. ಕೊನೆ ಪಕ್ಷ ಸುಘೋಷನ ಹುಡುಕುವ ಪ್ರಯತ್ನಗಳು ನಡೆಯಲಿಲ್ಲ ಶುಭಾಳ ಕಡೆಯಿಂದ.. ಮಗು ಅಪ್ಪನನ್ನು ಜರ್ಕೊಂಡು  ವಾರಗಟ್ಟಲೆ ಜ್ವರದಿಂದ ನರಳಿತ್ತು...

*********

ಇದನ್ನೆಲ್ಲಾ ನೆನೆದಾಗ ಈಗಲೇ ಬದುಕು ಹಗುರವಾಗಿದೆಯೆನಿಸಿತು..ಆದರೂ ಸುಘೋಷ ಬಹುವಾಗಿ ಕಾಡುತ್ತಿದ್ದ..." ಅಮ್ಮಾ ಅಮ್ಮಾ ಎಲ್ಲಿದ್ಯಾ !? "ಮಗಳು  ಎದ್ದು ಹುಡುಕುತ್ತಾ ಬಾಲ್ಕಾನಿಗೆ ಬಂದಳು...

ನೆನಪಿನ ನಾವೆಯಲ್ಲಿ ಬಹುದೂರ ತೇಲಿ ಹೋಗಿದ್ದ ಶುಭಾ ಮಗಳ ಮುಖ ನೋಡಿ ಪ್ರಸ್ತುತಕ್ಕೆ ಬಂದಳು... ತೂಗುಯ್ಯಾಲೆಯಿಂದಿಳಿದವಳೇ ಮಗಳನ್ನು ಎತ್ತಿಕೊಂಡು ಮುತ್ತಿಡುತ್ತಾ "ಹ್ಯಾಪಿ ಬರ್ತಡೇ ಕಂದಾ ನೂರ್ಕಾಲ ಸುಖವಾಗಿರು" ಎನ್ನುತ್ತಿದ್ದಂತೆ ಮನಸ್ಸು ಭಾರವಾಗಿ  ಕಣ್ಣುಗಳು ತುಂಬಿ ಬಂದವು... ಅಷ್ಟರಲ್ಲೇ ಇಂಟರ್ಕಾಮಿನ ಫೋನ್ ರಿಂಗಣಿಸಿತು... ಮಗಳನ್ನು  ತೂಗುಯ್ಯಾಲೆಯ ಮೇಲೆ ಕೂರಿಸಿ ಹಾಲ್ ನತ್ತ ಧಾವಿಸಿದಳು...
ಸೆಕ್ಯೂರಿಟಿ ಕಾಲ್ ಮಾಡಿದ್ದ...
" ಮೇಡಮ್, ಸುಘೋಷ್ ಸರ್ ಬಂದಿದಾರೆ.. ನಿಮ್ಮ ಮಗಳನ್ನು ಗೇಟ್ ಹತ್ರ ಕಳುಹಿಸಬೇಕಂತೆ... ಇಲ್ಲೇ ಕಾಯ್ತಿರ್ತಾರಂತೆ.."
ಎಂದಷ್ಟೇ ಹೇಳಿ ಫೋನಿಟ್ಟ..‌ ಒಂದು ಕಡೆ ಖುಷಿ ಮತ್ತೊಂದೆಡೆ ದುಃಖ ಒತ್ತರಿಸಿ ಬಂತು...
" ಮಗಳೇ, ಅಪ್ಪಾ ಬಂದಿದಾರೆ ಬಾ" ಅಂತ ಹರಡಿದ ಕೂದಲು ಸರಿಪಡಿಸಿಕೊಳ್ಳುತ್ತಾ ಮನೆ ಬೀಗ ಹಾಕಿ ಮಗಳನ್ನು ಕರೆದುಕೊಂಡು ಚಪ್ಪಲಿಯನ್ನೂ ಮರೆತು ಲಿಫ್ಟ್ ನ ಬಟನ್ ಒತ್ತಿದಳು....

2 comments: