ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದೆ, ಇಂಗ್ಲೀಷ್ ಪಠ್ಯಕ್ಕೆ ಕಲಾಂರವರ “wings of fire” ಕೃತಿಯಿಂದ ಅವರ ಬಾಲ್ಯದ ದಿನಗಳ ಭಾಗವನ್ನು ಪಾಠವಾಗಿ ಸೇರಿಸಿದ್ದರು, ರಮಣಿ ಸರ್ ಇಂಗ್ಲೀಷ್ ಮೇಸ್ತರು ತಮಿಳುನಾಡಿನವರೇ
ಆಗಿದ್ದರಿಂದಲೇನೋ ಆ ಪಾಠ ದೇಶೀಶೈಲಿಯಲ್ಲಿ ಕಿವಿಗೆಬಿದ್ದು ಮನಮುಟ್ಟಿ ಕಲಾಂ ಸರ್‌ಬದುಕಿನ ಆದರ್ಶ ನಾಯಕರಾಗಿದ್ದರು.
ಆಗಿದ್ದರಿಂದಲೇನೋ ಆ ಪಾಠ ದೇಶೀಶೈಲಿಯಲ್ಲಿ ಕಿವಿಗೆಬಿದ್ದು ಮನಮುಟ್ಟಿ ಕಲಾಂ ಸರ್‌ಬದುಕಿನ ಆದರ್ಶ ನಾಯಕರಾಗಿದ್ದರು.
ಹತ್ತನೇ ತರಗತಿಗೆ ಹೋಗುವ ಮುನ್ನ ಬೇಸಿಗೆ ರಜೆ, ಬೆಂಗಳೂರಿನ ಅವಿನ್ಯೂ ರಸ್ತೆ ಬದಿಯ ವ್ಯಾಪಾರಿ ಅಂಗಡಿಯಲ್ಲಿದ್ದ “wings of fire” ಪುಸ್ತಕ ಕಣ್ಣುಕುಕ್ಕಲು ಕಾಲು ಅಲ್ಲೇ ನಿಂತಿತು, ಪಠ್ಯದಲ್ಲಿದ್ದ ಪುಸ್ತಕದ ತುಣುಕೇ ಅಷ್ಟು ಮನಮುಟ್ಟಿತ್ತು ಸಂಪೂರ್ಣ ಪುಸ್ತಕವ ಓದುವ ಆಸೆ, ಮಗಳ ಆಸೆ ಅರಿತು ಅಪ್ಪಾಜಿ ಪುಸ್ತಕ ಕೊಡಿಸಿದ್ದರು, “wings of fire” ಪುಸ್ತಕದ ಒಡತಿ ನಾನೆಂದು ಗೆಳತಿಯರ ಮುಂದೆ ಬೀಗಬೇಕಿತ್ತು, ಹೊಸ ಪುಸ್ತಕವ ಹಾಗೇ ಜೋಪಾನ ಮಾಡಿದ್ದೆ, ಶಾಲೆ ಪ್ರಾರಂಭವಾಗಲು ಎಲ್ಲರಿಗೂ ತೋರಿಸಿದ್ದೆ, ಹುಡುಗುಬುದ್ದಿ, ಅದ್ಯಾರೋ ಗೆಳತಿ ಓದಿ ಹಿಂತಿರುಗಿಸುವೆ ಎನ್ನಲು ನಾನು ಓದುವ ಮುನ್ನವೇ ಅವಳ ಕೈಗೆ ಕೊಟ್ಟೆ, ಕೈಯಿಂದ ಕೈಗೆ ಹರಿದಾಡಿದ ಪುಸ್ತಕ ಯಾರ ಕೈಯಿಂದ ಕೈಜಾರಿತೋ, ಮಾಯವಾಯಿತು.
ಪುಸ್ತಕ ಕೊಂಡು ಗೆಳತಿಯರ ಮುಂದೆ ಬೀಗಿದ್ದಷ್ಟೇ ಲಾಭ ಪುಸ್ತಕದ ಒಳಹೊಕ್ಕು ನೋಡಲಾಗಲಿಲ್ಲ, ಪುಸ್ತಕ ಇನ್ನು ನೆನಪಷ್ಟೇ.
ಪುಸ್ತಕ ಕೊಂಡು ಗೆಳತಿಯರ ಮುಂದೆ ಬೀಗಿದ್ದಷ್ಟೇ ಲಾಭ ಪುಸ್ತಕದ ಒಳಹೊಕ್ಕು ನೋಡಲಾಗಲಿಲ್ಲ, ಪುಸ್ತಕ ಇನ್ನು ನೆನಪಷ್ಟೇ.
ಆಗ ದ್ವಿತೀಯ ಪಿಯುಸಿ ಪಿ ಸಿ ಎಂ ಬಿ ವಿದ್ಯಾರ್ಥಿನಿ ನಾನು, ಓದಿನಲ್ಲಿ ಸದಾ ಮುಂದು, ಕಲಾಂ ಸರ್ ದೇಶದ ರಾಷ್ಟ್ರಪತಿಗಳಾಗಿದ್ದರು, ಎಲ್ಲರಿಗೂ ತಿಳಿದಿರುವಂತೆ ಮಕ್ಕಳಲ್ಲಿ ದೇಶದ ಭವಿಷ್ಯ ಕಾಣುತ್ತಿದ್ದ ಅವರು ಎಲ್ಲೇ ಹೋದರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು, ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಅವರು ಹಾಸನಕ್ಕೆ ಭೇಟಿಮಾಡಲ್ಲಿದ್ದು ಹಾಸನದ ಕಲಾಭವನದಲ್ಲಿ ಹಾಸನದ ಶಾಲಾಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವಿದ್ದು ಪ್ರತಿ ಶಾಲೆ ಕಾಲೇಜಿನಿಂದ ಐದು ವಿದ್ಯಾರ್ಥಿಗಳ ಹೆಸರ ಪಟ್ಟಿ ನೀಡಲು ಇಲಾಖೆ ಕಾಲೇಜಿನವರಿಗೆ ನೀಡಲು ಓದಿನಲ್ಲಿ ಮುಂದಿದ್ದ ನನಗೆ ಸರ್‌ನ ನೇರವಾಗಿ ನೋಡುವ ಅವಕಾಶ . ಮನಸ್ಸಲ್ಲೇ ಆಶಾಗೋಪುರ, ಸಂವಾದದಲ್ಲಿ ಮಾತನಾಡುವ ಅವಕಾಶ ಸಿಕ್ಕರೆ ಏನು ಕೇಳಬೇಕು, ಹೇಗೆ ಹೋಗಬೇಕು ನನ್ನದೇ ತಯಾರಿ.
ಪದವಿ ಪೂರ್ವ ಇಲಾಖೆಯವರು ಎಲ್ಲಾ ಐದು ವಿದ್ಯಾರ್ಥಿಗಳು ಹೆಣ್ಣುಮಕ್ಕಳೆಂದು ಅದೇಕೆ ಕೆಂಡಮಂಡಲವಾದರೋ, ಹೆಸರುಗಳು ಬದಲಾದವು, ನಾಳೆ ಸಮಾರಂಭ, ಅಂದು ತರಗತಿಗೆ ಬಂದ ಬಯೋಲಜಿ ಸರ್ ಹೆಸರುಗಳು ಬದಲಾಗಿರುವ ವಿಷಯ ಹೇಳಲು ನಮ್ಮ ಆಸೆಗೆ ತಣ್ಣೀರು ಬಿತ್ತು, ಕಾಲೇಜಲ್ಲಿ ಎಲ್ಲಾ ವಿಭಾಗದಲ್ಲೂ ಹೆಣ್ಣು ಮಕ್ಕಳೇ ಸ್ಟ್ರಾಂಗು ಗುರು ಎಂಬಂತೆ , ಅಂದು ಅದೇ ನಮಗೆ ಶಾಪವಾಗಿ ಅವಕಾಶ ತಪ್ಪಿಸಿತ್ತು, ನಮ್ಮಷ್ಟೇ ಬೇಸರ ಸರ್‌ಗೂ, ಮಕ್ಕಳನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ಅವರಿಗೆ ವಹಿಸಲಾಗಿತ್ತು, ದುರದೃಷ್ಟಾವತ್ ಬಯೋಲಜಿ ಒಬ್ಬ ವಿದ್ಯಾರ್ಥಿಯೂ ಹೊಸಪಟ್ಟಿಯಲ್ಲಿರಲಿಲ್ಲ, ನಾನು ಅವರ ಮೆಚ್ಚಿನ ವಿದ್ಯಾರ್ಥಿ, ನನಗೆ ಅವಕಾಶ ತಪ್ಪಿದ್ದಕ್ಕೆ ನನ್ನಷ್ಟೇ ಬೇಸರ ಅವರಿಗಾಗಿತ್ತು ಎನ್ನುವುದು ಅವರ ಮಾತಲ್ಲಿ ಎದ್ದು ಕಾಣಿಸುತ್ತಿತ್ತು. ಬಾಡಿದ ಮನಸ್ಸಲ್ಲಿ ನಾನು ನನ್ನ ಗೆಳತಿ ಕಲಾಭವನದ ದಾರಿಯಲ್ಲಿ ಹೆಜ್ಜೆ ಹಾಕುತ್ತಿರಲು ನಾಳೆಯ ಸಮಾರಂಭಕ್ಕೆ ತಯಾರಾಗಿದ್ದ ಕಟ್‌ಔಟ್‌ನಲ್ಲಿದ್ದ ಕಲಾಂ ಸರ್ ಫೋಟೋ ಕಂಡು ಕಣ್ತುಂಬಿ ಬಂತು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು ಅಲ್ಲಿ ಅಳಲು ಪ್ರಾರಂಭಿಸಿದ್ದು ಮರುದಿನ ಚಂದನಾ ಚಾನೆಲ್‌ನಲ್ಲಿ ನೇರಪ್ರಸಾರ ಬರುವವರೆಗೂ ಊಟ ತಿಂಡಿ ಬಿಟ್ಟು ಅಳುತ್ತಾ ಕುಂತಿದ್ದೆ, ಅಮ್ಮಾ,
ಇನ್ನೂ ಉತ್ತಮ ವೇದಿಕೆಯಲ್ಲಿ ಅವರ ಭೇಟಿಯಾಗುವ ಅವಕಾಶವಿರಬಹುದು ಅದಕ್ಕೇ ಇಂದು ಕೈತಪ್ಪಿದೆ ಎಂದು ಎಷ್ಟೇ ಸಮಾಧಾನ ಹೇಳಿದರೂ ಬೇಸರ ಮರೆಯಾಗಲಿಲ್ಲ, ಮನಸ್ಸಿನ ಮೂಲೆಯಲ್ಲಿ ಅದೊಂದು ನೋವಾಗಿ ಕೂತುಬಿಟ್ಟಿತು.
ಇನ್ನೂ ಉತ್ತಮ ವೇದಿಕೆಯಲ್ಲಿ ಅವರ ಭೇಟಿಯಾಗುವ ಅವಕಾಶವಿರಬಹುದು ಅದಕ್ಕೇ ಇಂದು ಕೈತಪ್ಪಿದೆ ಎಂದು ಎಷ್ಟೇ ಸಮಾಧಾನ ಹೇಳಿದರೂ ಬೇಸರ ಮರೆಯಾಗಲಿಲ್ಲ, ಮನಸ್ಸಿನ ಮೂಲೆಯಲ್ಲಿ ಅದೊಂದು ನೋವಾಗಿ ಕೂತುಬಿಟ್ಟಿತು.
ಪಿಯುಸಿಯಲ್ಲಿ ಕಾಲೇಜಿಗೆ ಪ್ರಥಮವಾದರ ಫಲವಾಗಿ ಅನೇಕ ಸನ್ಮಾನಗಳು, ಅದರಲ್ಲಿ ಯಾವುದೋ ಒಂದು ಕಾರ್ಯಕ್ರಮದಲ್ಲಿ ಬಹುಮಾನವಾಗಿ “ಅಗ್ನಿಯ ರೆಕ್ಕೆಗಳು” ಪುಸ್ತಕ ನನ್ನ ಕೈಸೇರಿತ್ತು, ಬಹುಶಃ ಭಾಷಾಪ್ರೇಮದ ಫಲವೇನೋ, ಸರ್ ಜೀವನ ಕನ್ನಡದಲ್ಲಿ ಓದಿ ತಿಳಿಯಲಿ ಎಂದು, ಆದರೆ ಪ್ರಥಮ ವರುಷ ಎಂ ಬಿ ಬಿ ಎಸ್ ಪುಸ್ತಕ ಸಾಗರದೊಳಗಿನ ಈಜಾಟದಲ್ಲಿ ಅಗ್ನಿಯ ರೆಕ್ಕೆಗಳ ಪುಸ್ತಕ ಮೂಲೆಸೇರಿತು, ಆದರೆ ಕಲಾಂ ಸರ್ ಜೀವನ ತಿಳಿಯುವ ಕುತೂಹಲ, ಪರೀಕ್ಷೆ ಮುಗಿದದ್ದೇ ಅಗ್ನಿಯ ರೆಕ್ಕೆಗಳ ಗರಿಬಿಚ್ಚಿ ನನ್ನೊಳಗೆ ಹಾರಾಟ ಶುರು ಮಾಡಿತು, ಪ್ರತಿಪುಟ ಪ್ರತೀ ಕಥೆ ಮನಸ್ಸನ್ನು ಒಕ್ಕಿ ಕೂತಿತು, ಕಲಾಂ ಸರ್ ಜೀವನದ ಆದರ್ಶವಾದರು.
ಎಂ ಬಿ ಬಿ ಎಸ್ ಕಾಲೇಜಿನಲ್ಲಿ ದ್ವಿತೀಯ ವರ್ಷ, ಪರೀಕ್ಷಾ ಸಮಯ, ಎಲ್ಲಾ ಓದುವುದರಲ್ಲಿ ಮಗ್ನರಾಗಿರಲು ಕಲಾಂ ಸರ್ ಹಾಸನಕ್ಕೆ ಬಂದಿದ್ದು, ಜಿಲ್ಲಾಧಿಕಾರಿಗಳು ಹೊಸದಾಗಿ ಪ್ರಾರಂಭಗೊಂಡಿದ್ದ ಹಾಸನ ವೈದ್ಯಕೀಯ ಕಾಲೇಜಿನ ಹಾಗೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಬೇಕೆಂದು ಮನವಿ ಮಾಡಲು ಕಲಾಂ ಸರ್ ಒಪ್ಪಿದ್ದು ಇಂದು ಮಧ್ಯಾಹ್ನ ನಮ್ಮ ಕಾಲೇಜಿಗೆ ಕಲಾಂ ಸರ್ ಆಗಮನ ಎಂಬ ಸುದ್ದಿ ಕಾಲೇಜಲ್ಲಿ ಓಡಾಡುತ್ತಿತ್ತು, ದುರಾದೃಷ್ಟವಾತ್ ಅಂದು ನಮಗೆ ಪ್ರಾಕ್ಟಿಕಲ್ ಇಂಟರ್‌ನಲ್ ಪರೀಕ್ಷೆ, ಪರೀಕ್ಷೆ ರದ್ದುಗೊಳಿಸಲು ಮನವಿ ಮಾಡೋಣವೆಂದರೆ ಆ ವರ್ಷ ಆ ವಿಷಯದಲ್ಲಿ ನಾವೆಲ್ಲಾ ಪಾಸಾಗೋಕೆ ಲಾಗಾ ಹಾಕುತ್ತಿದ್ದೆವು, ಆದರೆ ಕಲಾಂ ಸರ್ ಮುಂದೆ ವಿಭಾಗದ ಪ್ರೊಫೆಸರ್‌ಗಳ ಕೆಂಗಣ್ಣಿಗೆ ಗುರಿಯಾಗುವುದು ನಮಗೆ ದೊಡ್ಡದೆನಿಸಲಿಲ್ಲ, ಧೈರ್ಯ ಮಾಡಿ ಅನುಮತಿ ಕೇಳಿದೆವು, ಅವರಿಗೂ ಕಾರ್ಯಕ್ರಮದ ಭಾಗವಾಗುವ ಇರಾದೆ, ಪರೀಕ್ಷೆ ಮುಂದೂಡಿದರು, ನಮ್ಮ ಖುಷಿಗೆ ಪಾರವೇ ಇಲ್ಲ.
ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲು ಕಾಲೇಜು ಸಿದ್ದವಾಯಿತು, ಭದ್ರತೆ ದೃಷ್ಠಿಯಿಂದ ಫೋನ್ ಬ್ಯಾಗ್ ತರುವಂತಿಲ್ಲವೆಂದು ನಿರ್ದೇಶಿಸಲು ನಾನು ಹಾಸ್ಟೆಲ್‌ಗೆ ಹೋಗಿ ನನ್ನ ಗೆಳತಿಯ ಕೋಣೆಯಲ್ಲಿ ಲಗ್ಗೇಜ್ ಇಳಿಸಿ ಕಾಲೇಜು ಕಡೆ ನಡೆಯಲು ಕೆಲ ಹುಡುಗಿಯರು ಪುಸ್ತಕ ಹುಳುವಂತೆ ಓಡಾಡುತ್ತಾ ಓದುತ್ತಿರಲು ನಾನು ಸುಮ್ಮನಿರದೇ ಕಲಾಂ ಸರ್ ನೋಡಲು ಬರಲ್ವಾ ಎನ್ನಲು ಪರೀಕ್ಷೆ ಹತ್ತಿರವಾಗುತ್ತಿದೆ ಘಂಟೆಗಟ್ಟಲೆ ಅವರ ಭಾಷಣ ಕೇಳಲು ಸಮಯವಿಲ್ಲವೆಂದು ಲಘುವಾಗಿ ಮಾತಾಡಿಬಿಟ್ಟರು, ಅಂತಹ ಮೇರು ವ್ಯಕ್ತಿಯನ್ನು ಕಂಡರೂ ಅವರ ನೆರಳು ಸೋಕಲು ಜನ್ಮಪಾವನವೆನ್ನುವ ನನ್ನಂತವರಿಗೆ ಅವರ ಹಗುರವಾದ ಮಾತುಗಳು ಕೋಪ ತರಿಸಿತು, ನನ್ನ ಗೆಳತಿ ವರುಷವೆಲ್ಲಾ ಊರೆಲ್ಲಾ ಸುತ್ತುವ ಈ ಹುಡುಗಿಯರು ಪರೀಕ್ಷಾ ಸಮಯಕ್ಕೆ ಪುಸ್ತಕ ಹುಳುಗಳಾಗುವುದು ಹೊಸದೇನಲ್ಲಾ, ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ ಅವರ ಮಾತಿಗೆ ಕಿವಿಗೆ ಕೊಡಬೇಡ ಎಂದು ನನ್ನ ಅಲ್ಲಿಂದ ಕರೆದುಕೊಂಡು ಹೋದಳು.
ರಾಷ್ಟ್ರಪತಿಗಳ ಆಗಮನ, ನಮ್ಮ ಕಾಲೇಜಲ್ಲೇ ನಮ್ಮನ್ನು ಪರೀಕ್ಷೆ ಮಾಡಿ ಒಳಗೆ ಬಿಡುತ್ತಿದ್ದರು, ಮೊದಲ ಬಾರಿಗೆ ಕಾಲೇಜು ವಿ ಐ ಪಿ ಆಗಮನಕ್ಕೆ ಬಿಗಿಭದ್ರತೆಯೊಂದಿಗೆ ಸಜ್ಜಾಗಿತ್ತು, ನಾನಂತೂ ಮುಂದಿನ ಕೆಲವು ಸಾಲಲ್ಲೇ ಜಾಗಮಾಡಿಕೊಂಡು ಕೂತೆ, ನಮ್ಮ ಕಾಲೇಜಿನ ಸಿಬ್ಬಂಧಿ ವಿದ್ಯಾರ್ಥಿಗಳುಎಂಜಿನಿಯರಿಂಗ್ ಕಾಲೇಜು ಸಿಬ್ಬಂಧಿ ವಿದ್ಯಾರ್ಥಿಗಳು ಹಾಲ್ ತುಂಬಿ ಮೇರು ವ್ಯಕ್ತಿಯ ಆಗಮನಕ್ಕೆ ಬಾಗಿಲನ್ನೇ ನೋಡುತ್ತಾ ಕಾದಿತ್ತು. ಮುಗುಳ್ನಗೆ ಬೀರುತ್ತಾ ಆಗಮಿಸಿದ ಕಲಾಂ ಸರ್ ಪಾದಸ್ಪರ್ಶವಾದದ್ದೇ ಹಾಲ್‌ನಲ್ಲಿ ಹೊಸ ಸಂಚಲನ, ಆ ನಗುವಲ್ಲಿ ಹೊಸಭರವಸೆ, ಕಾರ್ಯಕ್ರಮ ಪ್ರಾರಂಭವಾದದ್ದೇ ನನ್ನ ಕಣ್ಣು ಸರ್ ಬಿಟ್ಟು ಬೇರೇನೂ ನೋಡಿರಲಿಲ್ಲ, ಕನಸೊಂದು ರೂಪ ಪಡೆದು ಎದುರು ನಿಂತಿತ್ತು. ಎಂಜಿನಿಯರಿಂಗ್ ವೈದ್ಯ ವಿದ್ಯಾರ್ಥಿಗಳು ಎರಡು ವಿಭಿನ್ನ ಮನಸ್ಥಿತಿಯರ ಕುರಿತು ಅವರು ಮಾತು ಮೊದಲು ಮಾಡಲು ಮನದಲ್ಲಿ ಯೋಚನೆಗಳ ಸುರಿಮಳೆ ಹೊಸ ಚಿಂತನೆಗಳ ಪರ್ವ, ಹೊಸ ಆವಿಷ್ಕಾಕರಗಳಲ್ಲಿ ನಮ್ಮ ಪಾತ್ರದ ಬಗೆಗೆ ಅವರು ಹೇಳುತ್ತಿದ್ದರೆ ಅವರ ಮಾತಿಗೆ ಮಾರುಹೋಗದೆ ಬೇರೆ ದಾರಿಯಿರಲಿಲ್ಲ, ಮಾಂತ್ರಿಕರು ಅವರು, ಅವರನ್ನು ಹೊಗಳಲು ಪದಗಳಿಲ್ಲ ಬಿಡಿ, ಅಷ್ಟು ಪರಿಣಾಮಕಾರಿಯಾಗಿ ವಿಷಯ ಮಂಡಿಸಿ ಸಂವಾದ ನಡೆಸಿದರು, ಈಗಲೂ ಎಲ್ಲಾ ಕಣ್ಮುಂದೆ ನಡೆದಂತಿದೆ, ಜಿಲ್ಲಾಧಿಕಾರಿಗಳು ಮನವಿ ಮಾಡಿದ ತಕ್ಷಣ ಮರುಮಾತನಾಡದೇ ಬಂದು ನಮಗೆ ತಮ್ಮ ಜ್ಞಾನಧಾರೆಯೆರಿದ ಅವರು ನಮ್ಮ ಕಣ್ಣಲ್ಲಿ ಇನ್ನೂ ಎತ್ತರದ ಸ್ಥಾನಕ್ಕೇರಿದರು, ಮಹಾನ್ ವ್ಯಕ್ತಿಯ ದರ್ಶನ ಭಾಗ್ಯದಿಂದ ಜೀವನ ಸಾರ್ಥಕವೆನಿಸಿತ್ತು.
ಅಮ್ಮಾ ಸರಿಯಾಗೇ ಹೇಳಿದ್ದರು ನಿನಗೆ ಇನ್ನೂ ಉತ್ತಮ ವೇದಿಕೆಯಲ್ಲಿ ಅವರ ಭೇಟಿಯಾಗುವ ಅವಕಾಶವಿರಬಹುದು ಅದಕ್ಕೇ ಇಂದು ಅವಕಾಶ ಕೈತಪ್ಪಿದೆ ಎಂದು, ಬಿಳಿ ಕೋಟ್ ಧರಿಸಿ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರಸಿದ್ದ ವೈದ್ಯಮಹಾಶಯರು ವೈದ್ಯವಿದ್ಯಾರ್ಥಿಗಳು ಎಂಜಿನಿಯರಿಂಗ್ ವಿದ್ಯಾರ್ಥಿಗಳ ನಡುವೆ ಕಲಾಂ ಸರ್ ಮಾತನಾಡಲು ಆ ಮಾತುಗಳು ಕಿವಿಮುಟ್ಟಲು ಸ್ವರ್ಗಕ್ಕೆ ಮೂರೇ ಗೇಣು. ಆಗುವುದೆಲ್ಲಾ ಒಳ್ಳೆಯದಕ್ಕೇ.
ಕಲಾಂ ಸರ್ ಹೆಸರಲ್ಲೇ ಒಂದು ಶಕ್ತಿಯಿದೆ, ಅವರ ಜೀವನ ಒಂದು ಯಶೋಗಾಥೆಯಾಗಿ ಆದರ್ಶ ಬದುಕಿಗೆ ದಾರಿದೀಪವಾಗುತ್ತದೆ, ಬದುಕಿದರೆ ಅವರಂತೆ ಬದುಕಬೇಕೆಂದು ಮಾದರಿ ಬದುಕಿನ ಪರಿಚಯ ಮಾಡುತ್ತದೆ, ನಿಮ್ಮ ಕಾಲದಲ್ಲಿ ನಾವು ಬದುಕಿದ್ದೆವು ನಿಮ್ಮನ್ನು ಕಣ್ಣಾರೆ ಕಂಡೆವು ನಿಮ್ಮ ಮಾತುಗಳು ನಮ್ಮ ಕಿವಿಮುಟ್ಟಿದವು ಎಂಬುದೇ ನಮಗೆ ಹೆಮ್ಮೆ, ಸರ್ ನಿಮ್ಮ ಬದುಕು ನಮಗೆ ಮಾದರಿ ನಿಮ್ಮ ಆದರ್ಶಗಳ ಹಾದಿಯಲ್ಲಿ ನಡೆಯುವ ಪ್ರಯತ್ನ ನಮ್ಮದು , ನಮ್ಮಂತಹ ಯುವಮನಸ್ಸುಗಳನ್ನು ಮುಟ್ಟುವಂತೆ ಬದುಕಿದ ನಿಮ್ಮ ಬದುಕಿನ ರೀತಿಗೆ ನಿಮ್ಮ ಸಾಧನೆ ಸರಳತೆ ದೇಶಪ್ರೇಮ ಭಾವೈಕ್ಯತೆ ಜ್ಞಾನಭಂಡಾರಕ್ಕೆ ಇಗೋ ನನ್ನದೊಂದು ಸಲಾಂ
- ಡಾ.ಶಾಲಿನಿ.ವಿ.ಎಲ್

No comments:
Post a Comment